ಆಂಟಿಯೋಕಸ್ 3
 
ಕ್ರಿ.ಪೂ. 223ರಲ್ಲಿ ಸೆಲ್ಯೂಸಿಡ್ ರಾಜ್ಯಕ್ಕೆ ದೊರೆಯಾಗಿದ್ದವ. ಸೆಲ್ಯುಕಸ್‍ನ ಆಳ್ವಿಕೆಯಲ್ಲಿದ್ದ ಪ್ರದೇಶಗಳನ್ನೆಲ್ಲ ಪುನಃ ಪಡೆಯಬೇಕೆಂದು ಮೊದಲು ಪೌರ್ವಾತ್ಯದೇಶಗಳಮೇಲೆ ನುಗ್ಗಿ ಪಾರ್ಥಿಯ, ಬ್ಯಾಕ್ಟ್ರಿಯ ಮುಂತಾದ ರಾಜ್ಯಗಳ ದೊರೆಗಳನ್ನೆಲ್ಲ ತನ್ನ ಸಾರ್ವಭೌಮತ್ವಕ್ಕೆ ತಲೆಬಾಗುವಂತೆ ಮಾಡಿದ. ಅನಂತರ ಪಶ್ಚಿಮದ ಕಡೆ ನುಗ್ಗಿ ಈಜಿಪ್ಟಿನ ಸೈನ್ಯವನ್ನು ಸೋಲಿಸಿ ಪ್ಯಾಲೆಸ್ಟೈನ್ ಪ್ರಾಂತ್ಯವನ್ನು ತನ್ನ ಆಧಿಪತ್ಯಕ್ಕೆ ಸೇರಿಸಿಕೊಂಡ. ಮಗಳಾದ ಕ್ಲಿಯೋಪಾತ್ರಳನ್ನು ಈಜಿಪ್ಟಿನ ದೊರೆ ಐದನೆಯ ಟಾಲೆಮಿಗೆ ಕೊಟ್ಟು ವಿವಾಹ ಮಾಡಿದ. ಅಲೆಕ್ಸಾಂಡರ್‍ಗೆ ಸೇರಿದ ಗ್ರೀಸ್, ಮ್ಯಾಸಿಡೋನಿಯಗಳನ್ನು ಗೆಲ್ಲಲು ಆಶಿಸಿದ. ಇದೇ ಕಾಲಕ್ಕೆ ರೋಮನರಿಂದ ಪರಾಭವ ಹೊಂದಿ ಇವನಲ್ಲಿಗೆ ಬಂದಿದ್ದ ಹ್ಯಾನಿಬಾಲ್‍ನ ಪ್ರೇರಣೆಯಂತೆ ಗ್ರೀಸಿನ ಮೇಲೆ ದಂಡೆತ್ತಿಹೋದ. ಆದರೆ ರೋಮನ್ ಪ್ರಜಾಧಿಪತ್ಯದ ಶಕ್ತಿಯನ್ನು ಎದುರಿಸಲಾರದೆ, ಥರ್ಮಾಪಲೆ ಮತ್ತು ಮ್ಯಾಗ್ನಿಸಿಯ ಎಂಬ ಕದನಗಳಲ್ಲಿ ಸೋತು, ಏಷ್ಯಮೈನರ್‍ನ ಪಶ್ಚಿಮ ಪ್ರಾಂತ್ಯಗಳನ್ನು ರೋಮನರಿಗೆ ಬಿಟ್ಟುಕೊಟ್ಟ. ಗ್ರೀಕ್ ಮತ್ತು ರೋಮ್ ಚರಿತ್ರಕಾರರು ಇವನನ್ನು ಮಹಾಶಯ ಎಂದು ಕರೆದಿದ್ದಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ